ಉರಿತ
ವೈದ್ಯಶಾಸ್ತ್ರದಲ್ಲಿ ಪೆಟ್ಟು, ಗಾಯಗಳಿಗೆ ಪ್ರತಿಕ್ರಿಯೆಯಾಗಿ ಜೀವಿಯ ಊತಕದಲ್ಲಿ (ಟಿಷ್ಯು) ತೋರುವ ಒಂದು ಸ್ಥಿತಿ. ಪರಿಸರಕ್ಕೆ ಹೊಂದಿಕೊಂಡು ಬದುಕಿರಲೋಸುಗ ಜೀವಿಗಳಲ್ಲಿ ಹೊಮ್ಮುವ ತೊಡಕಿನ ಯಾಂತ್ರಿಕತೆಯಿದು (ಇನ್‍ಫ್ಲಮೇಷನ್), ಕೆಂಪಗೆ ಊದಿಕೊಂಡು ಕಾವೇರಿ ಉರಿಯುವುದರರಿಂದ ಈ ಹೆಸರು. ಭೌತ, ಜೈವಿಕ ಪ್ರಪಂಚದಲ್ಲಿ ತಾಕುವ ಪೆಟ್ಟುಗಳು. ಹೊರ ವಸ್ತುಗಳ ದಾಳಿಗಳನ್ನು ಎದುರಿಸುವುದರಲ್ಲಿ, ಚೋದನೆಗೆ (ಸ್ಟಿಮುಲೇಷನ್) ಮರುವರ್ತನೆ, ನುಂಗಣೆ, ಅರಗಣೆ, ಹೊಸ ವಸ್ತುಗಳ ತಯಾರಿಕೆ ಮುಂತಾದ ಹುಟ್ಟುಗುಣಗಳು ಇದರಲ್ಲಿ ಕಾಣಬರುತ್ತವೆ. ಜೀವಕಣಗಳಲ್ಲಿ ನಿಜಗೆಲಸಗಳು ಹಂಚಿಹೋಗಿ, ಹೊಸ ರಾಸಾಯನಿಕವಲ್ಲದೆ ರೂಪಗಳ ರಚನೆಗಟ್ಟುಗಳು (ಸ್ಟ್ರಕ್ಚರ್ಸ್) ಏಳುತ್ತಾ, ಅಮೀಬದಿಂದ ಹಿಡಿದು ಮಾನವನ ತನಕ ಈ ವಿಧಾನ ಇನ್ನೂ ಜಟಿಲವಾಗುತ್ತ ಬಂದಿದೆ. ಬೇರೆ ಎಲ್ಲ ಯಾಂತ್ರೀಕತೆಗಳ ಹಾಗೇ ಇದರ ಆಚರಣೆಗೂ ಮಿತಿಗಳಿವೆ. ಮಿತಿ ಮೀರಿದರೆ ಇದು ನಡೆಯುವುದೇ ಇಲ್ಲ. ಇತರ ಯಾಂತ್ರಿಕತೆಗಳಂತೆ ಇದೂ ಅಡ್ಡಾದಿಡ್ಡಿ ಆಗಬಹುದು. ಹಾಗಾದಾಗಲೇ ರೋಗ ಕಾಣಿಸಿಕೊಳ್ಳುತ್ತದೆ. ಉರಿತ ಇಲ್ಲದಿದ್ದರೆ, ಯಾವ ಪ್ರಾಣಿಯೂ ಉಳಿಯುತ್ತಿರಲಿಲ್ಲ. ಇದು ಸುಗಮವಾಗಿ ನಡೆಯುತ್ತಿದ್ದರೆ, ಜೀವಿಯು ತನ್ನತನವನ್ನೂ ಪೂರ್ಣತೆಯನ್ನೂ ಉರಿತದ ಯಾಂತ್ರೀಕತೆ ಖಚಿತಗೊಳಿಸಲು ನೆರವಾಗುವುದು.
ಸಾಮಾನ್ಯ ಮಾದರಿ : ಉರಿತದ ಚರಿತ್ರೆಯನ್ನು ರೋಗ ಶಾಸ್ತ್ರದ ಚರಿತ್ರೆಯೆಂದೇ ತಿಳಿಯಬಹುದು. ಕೀವುಗೂಡುವುದೇ ಮೊದಲಾದ ಉರಿತದ ಕೆಲವು ಮೊಗಗಳನ್ನು ಕ್ರಿ.ಪೂ. 2000 ವರ್ಷಗಳ ಹಿಂದೆಯೇ ಈಜಿಪ್ಟಿನ ಆಪುಕರಡುಗಳಲ್ಲಿ (ಪಪೈರಸ್) ನಮೂದಿಸಿದೆ. ಉರಿತದಲ್ಲಿ ಎದ್ದು ಕಾಣುವ ಲಕ್ಷಣಗಳಾದ, ಕೆಂಪೇರಿಕೆ (ರೂಬರ್), ಊತ (ಟ್ಯೂಮರ್), ಕಾವು (ಕ್ಯಾಲರ್), ನೋವು (ಡೊಲರ್)-ಇವನ್ನು ರೋಗವೆಂದು ತಿಳಿದು ಒಂದನೆಯ ಶತಮಾನದಲ್ಲಿ ಸೆಲ್ಸಸ್ ಬಣ್ಣಿಸಿದ. ಇವಷ್ಟೇ ಅಲ್ಲದೆ. ಉರಿತವೆದ್ದ ಭಾಗದ ನಿಜಗೆಲಸವೂ ಕೆಟ್ಟಿರುವುದೆಂದು ಸೂಚಿಸಿ, ಗಾಯ ಪೆಟ್ಟುಗಳಿಂದ ಉರಿತ ಏಳಬಹುದೆಂದು, 3ನೆಯ ಶತಮಾನದಲ್ಲಿ ಗ್ಯಾಲನ್ ವಿವರಿಸಿದ್ದರೂ ಯಾವ ಪೆಟ್ಟಿನಿಂದಲಾದರೂ ಒಂದೆಡೆಯ ಊತಕದಲ್ಲಿ ಏಳುವ ಮುಖ್ಯವಾದ ಸಾಮಾನ್ಯ ಪ್ರತಿಕ್ರಿಯೆಯೇ ಉರಿತವೆಂದು ಮೊಟ್ಟಮೊದಲು ಅನುಮಾನವಿಲ್ಲದಂತೆ 18ನೆಯ ಶತಮಾನದಲ್ಲಿ ಗುರುತಿಸಿದವ ಜಾನ್ ಹಂಟರ್. ಮೇಲ್ತರದ ಪ್ರಾಣಿಗಳಲ್ಲಿ ಅಗುವ ಉರಿತದ ಮುಖ್ಯ ಕ್ರಮಗತಿಯಲ್ಲಿ ಮೂರು ಹಂತಗಳನ್ನು ಗುರುತಿಸಬಹುದು; ಕೆರಳತೆಗೆ ಕಾರಣವಾದ ಕಾರಕವನ್ನು ಹಾಳುಮಾಡಿ ತೆಗೆದುಹಾಕುವ ರಕ್ತನಾಳಗಳ ಬದಲಾವಣೆಗಳು; ಸೊನೆ (ಎಕ್ಸುಡೇಟ್) ಸುರಿತ: ಹಾಳಾದ ಭಾಗಗಳ ಆಮೇಲಿನ ನೇರ್ಪಾಟು (ರಿಪೇರಿ), ಮೊದಲ ಕೆಲಸವನ್ನು ಅಲೆದಾಡುವ ಜೀವಕಣಗಳೂ ಎರಡನೆಯದನ್ನು ಊತಕದವೂ ಮಾಡುವುವು.

ರಕ್ತ ನಾಳಗಳ ಬದಲಾವಣೆಗಳು : ಜೀವಿಗಳಲ್ಲಿ ಗಾಯಗಳನ್ನು (ಲೀಷನ್ಸ್) ಮಾಡಿ ಸೂಕ್ಷ್ಮದರ್ಶಕ, ರಾಸಾಯನಿಕ ಪ್ರಯೋಗಗಳನ್ನು ನಡೆಸಿ ಪಡೆದ ತಿಳಿವಳಿಕೆಯಿಂದ ಉರಿತದ ಕ್ರಮಗತಿ ಬಹುಮಟ್ಟಿಗೆ ಗೊತ್ತಾಗಿದೆ. ಕಪ್ಪೆಯ ನಾಲಗೆ, ಕಾಲುಗಳ ಜಾಲಗಳು, ಕರುಳು ನಡುಪೊರೆಗಳಂಥ (ಮೆಸಂಟರಿ) ಸಿಲುವಿನ (ಪಾರದರ್ಶಕ) ರಚನೆಗಟ್ಟುಗಳನ್ನು ಇದಕ್ಕಾಗಿ 19ನೆಯ ಶತಮಾನದ ನಡುವಿನಲ್ಲಿ ಜರ್ಮನ್ ಪ್ರಾಯೋಗಿಕರೋಗಶಾಸ್ತ್ರಜ್ಞ ಜೆ.ಎಫ್. ಕನ್‍ಹೀಮ್ ಬಳಸಿದ. ಉರಿತ ಎಬ್ಬಿಸಲು ಬೆಳ್ಳಿಯನೈಟ್ರೇಟು, ಜಾಪಾಳದೆಣ್ಣೆ ತೆರನ ವಸ್ತುಗಳನ್ನು ಹಚ್ಚಿದ. ಇದರಿಂದ ಕೆರಳಿದ ಮೇಲೆ ಆಗುವ ರಕ್ತನಾಳಗಳ ಬದಲಾವಣೆಗಳ ಸಾಲನ್ನು ಸೂಕ್ಷ್ಮ್ಮದರ್ಶಕದಿಂದ ಕಂಡ, ರಕ್ತ ನಾಳಗಳು ಮುಖ್ಯವಾಗಿ ಹಿಗ್ಗುತ್ತವೆ; ಕೆಲವೇಳೆ ಮೊದಲು ಕೊಂಚಕಾಲ ಕುಗ್ಗುವುದುಂಟು. ಮೊದಲು ಕಿರಿಧಮನಿಗಳು ಹಿಗ್ಗುತ್ತವೆ; ಆಮೇಲೆ ಸಿರಗಳು, ಕೊನೆಗೆ ಲೋಮನಾಳಗಳು ಹಿಗ್ಗಿದಂತೆಲ್ಲ, ಎಲ್ಲ ರಕ್ತನಾಳಗಳಲ್ಲೂ ರಕ್ತ ಹರಿವಿನ ವೇಗ ಏರುವುದು, ಆಮೇಲೆ ರಕ್ತದ ಹರಿವು ಮೊದಲಿಗಿಂತ ನಿಧಾನವಾದರೂ ರಕ್ತನಾಳಗಳು ಹಿಗ್ಗಿಕೊಂಡೇ ಇರುತ್ತವೆ. ಲೋಮನಾಳಗಳು ಇನ್ನೂ ಚೆನ್ನಾಗಿ ಎದ್ದು ತೋರುವುವು. ಕೆಲವು ತಾಸುಗಳು ಕಳೆದ ಮೇಲೆ ಎಲ್ಲ ರಕ್ತ ನಾಳಗಳಲ್ಲೂ ಅಸಹಜವಾಗಿ ರಕ್ತ ತುಂಬಿಕೊಂಡ ಹಾಗೆ ತೋರುತ್ತದೆ. ರಕ್ತದ ಹರಿವಿನ ಅಂಚಿನ ಪದರಗಳಲ್ಲಿ ಎಷ್ಟೋ ಬಿಳಿಯ ರಕ್ತಕಣಗಳಿದ್ದು ರಕ್ತನಾಳಗಳ ಗೋಡೆಗಳಿಗೆ ಅಂಟಿಕೊಂಡಿರುತ್ತವೆ. ಅಲ್ಲದೆ ಕೆಂಪು ರಕ್ತಕಣಗಳು ರಾಶಿ ಬಿದ್ದಿರುವುದು ಕಾಣುವುದು. ಕೆಲವು ರಕ್ತನಾಳಗಳಲ್ಲೆ ಸದ್ಯಕ್ಕೆ ರಕ್ತದ ಹರಿವು ನಿಂತುಬಿಡಬಹುದು. ಬಿಳಿ ಕಣಗಳು (ಊಕೊಸೈಟ್ಸ್) ಒಳಪೊರೆಗೆ (ಎಂಡೋತೀಲಿಯಂ) ತಾಸುಗಟ್ಟಲೆ ಅಂಟಿಕೊಂಡೇ ಇರಬಹುದು. ಕಿವುಚಿಕೆ, ಗಿಲ್ಲುವುದು, ಒತ್ತಡ ಇವುಗಳ ತೆರನ ಮೆಲುಪಿನ ಗಾಯವಾದ ಮೇಲೆ, ರಕ್ತದ ಹರಿವು ಬೇಗನೆ ಮುನ್ನಿನಂತಾಗಿ, ಅಂಟಿಕೊಂಡಿದ್ದ ಬಿಳಿಕಣಗಳು ಜಾಗ ಬಿಟ್ಟು ಮುಂದೆ ಸಾಗುತ್ತವೆ. ಇನ್ನೂ ಬಲವಾದ ಗಾಯವಾದರೆ, ರಕ್ತನಾಳಗಳ ಬದಲಾವಣೆಗಳು ಹಾಗೇ ಉಳಿಯುತ್ತವೆ. ಕೆಲವು ರಕ್ತನಾಳಗಳಲ್ಲಿ ಕೂಡುಕರಣಿಕೆಯಿಂದ (ತ್ರಾಂಬೋಸಿಸ್) ಅಡಚಣೆಯಾಗಬಹುದು. ಉರಿತ ಎದ್ದಾಗಲೆಲ್ಲಾ ರಕ್ತನಾಳಗಳ ಬದಲಾವಣೆಗಳು ಆಗಲೇಬೇಕೆಂದಿಲ್ಲ. ಕಣ್ಣಿನ ಮುಂದುಗಡೆ ಇರುವ ಕೋಡುಪೊರೆಯಲ್ಲಿ (ಕಾರ್ನಿಯ) ರಕ್ತನಾಳಗಳೇ ಇರದಿದ್ದರೂ ಅಲೆಯುವ ಬಿಳಿಕಣಗಳು ಅಲ್ಲಿಗೂ ನುಗ್ಗುತ್ತವೆ.

	ಸೊನೆ ಸುರಿತ: ಉರಿತದ ವಿಶೇಷ ಲಕ್ಷಣಗಳಲ್ಲಿ ಒಂದಾದ ಸೊನೆ ಸುರಿತಕ್ಕೂ ಸಣ್ಣ ರಕ್ತನಾಳಗಳ ಒಳಪೊರೆಯಲ್ಲಾಗುವ ಬದಲಾವಣೆಗಳಿಗೂ ಸಂಬಂಧವಿದೆ. ಗಾಯವಾದ ತಾವಿನಲ್ಲಿ ಕಂಡುಬರುವ, ಸಾಮಾನ್ಯವಾಗಿ ಜೀವಕಣಗಳೂ ಜೀವಕಣದ ಚೂರುಗಳೂ ಸೇರಿರುವ, ಜೋಲಂಟು (ಕಲಾಯ್ಡ್) ಕೂಡಿದ ದ್ರವ ತುಂಬಿದುದೇ ಸೊನೆ. ಜೋಲಂಟೂ ಜೀವಕಣಗಳೂ ಬಹುಮಟ್ಟಿಗೆ ರಕ್ತದಿಂದಲೇ ಬಂದವು. ಕೆಲವಂತೂ ಊತಕದ ಸಾರಾಂಶದಿಂದ (ಪೇರೆಂಖೈಮ) ಬರಬಹುದು. ರಕ್ತನಾಳದಾಚೆಗಿನ ದ್ರವದಲ್ಲಿ ಯಾವಾಗಲೂ ಎಲ್ಲೋ ಕೊಂಚ ಮಾತ್ರ ರಕ್ತರಸದ (ಪ್ಲಾಸ್ಮ), ಪ್ರೋಟೀನುಗಳಿರುತ್ತವೆ. ಆದರೆ ಉರಿತದಲ್ಲಿ ಸಣ್ಣ ನಾಳಗಳಿಂದ ದ್ರವ ಹೊರಕ್ಕೆ ಜಿನುಗುವುದು ಹೆಚ್ಚುತ್ತದೆ. ರಕ್ತರಸದಲ್ಲಿರುವ ಲೋಳೆಗೆ (ಆಲ್ಬುಮಿನ್) ಹತ್ತಿಕೊಳ್ಳುವ ಒಂದು ಬಣ್ಣವಸ್ತು ರಕ್ತದ ಹರಿವಿನೊಳಕ್ಕೆ ಸಾಗಬಿಟ್ಟು, ಆ ತಾವಿನಲ್ಲಿ ಉರಿತ ಎಬ್ಬಿಸಿದರೆ, ಕೊಂಚ ಹೊತ್ತಿನಲ್ಲೇ ಗಾಯದಲ್ಲೂ ಅದರ ಸುತ್ತಲೂ ಆ ಬಣ್ಣವಸ್ತು ಕಾಣಿಸಿಕೊಳ್ಳುತ್ತದೆ.

	ಕಾನ್ ಹೀಮ್ ಮತ್ತಿತರರು ಕಂಡಂತೆ, ಸೊನೆಯ ಬಿಳಿಕಣಗಳು ಬಹುವಾಗಿ ರಕ್ತದಿಂದ ಬರುತ್ತವೆ. ಗಾಜನ್ನಿಟ್ಟು ನೋಡುತ್ತಿದ್ದರೆ, ಉರಿತವಾಗಿರುವ ತಾವಿಗೆ ಬಿಳಿಕಣಗಳು ನುಗ್ಗುವುದನ್ನು ಕಾಣಬಹುದು. ಒಳಪೊರೆಗೆ ಬಿಳಿಕಣಗಳು ಅಂಟಿಕೊಳ್ಳುವ ಹಂತ ಕಳೆದ ಮೇಲೆ, ಈ ಜೀವಕಣಗಳು ಒಳಪೊರೆಯ ಮೂಲಕ ಆಚೆಗೆ ತೂರಿ ದಾಟುವುದನ್ನು ನೋಡಬಹುದು. ಅಮೀಬದ (ಅಮೀಬಾಯ್ಡ್) ಚಲನೆಯಿಂದ ಬಿಳಿಕಣಗಳು ರಕ್ತನಾಳ ಗೋಡೆಯ ಮೂಲಕ ನುಣುಚಿಕೊಂಡು ಊತಕದ ಜೀವಕಣಗಳ ನಡುವಣ ತೆರಪಿನೊಳಕ್ಕೆ ಜಾರಿಕೊಳ್ಳುತ್ತವೆ. ಒಳಪೊರೆಯ ಜೀವಕಣಗಳ ನಡುವೆಯೇ ಬಿಳಿಕಣಗಳ ಸಾಗಣೆ ಇರಬಹುದು. ಗಾಯದ, ಲಕ್ಷಣ, ಜೋರುಗಳಿಗೆ ತಕ್ಕ ಹಾಗೆ, ಬೇಗನೆ ಅವು ನುಣುಚಿಕೊಳ್ಳುವುವು.

	ಉರಿತದಲ್ಲಿ ಬಿಳಿಕಣಗಳನ್ನು ಇತರರು ಕಂಡಿದ್ದರೂ ಅವು ಅಲೆದಾಡುವ ತೀನಿಕಣಗಳೆಂದು (ಫಾಗೊಸೈಟ್ಸ್) 1822ರಲ್ಲಿ ಒತ್ತಿ ಹೇಳಿದವ ರಷ್ಯದ ಪ್ರಾಣಿಶಾಸ್ತ್ರಜ್ಞ ಎಲೀಮೆಷ್ನಿಕಾವ್. ಬೇರೆ ಬೇರೆ ಪ್ರಾಣಿಗಳಲ್ಲಿ ರೋಗಶಾಸ್ತ್ರ ಕಣ್ಣರಿಕೆಗಳಲ್ಲಿನ ಅವನ ಸ್ಮರಣೆ ಈಗಲೂ ಹೆಸರುವಾಸಿ. ರಕ್ತ ಸುತ್ತುವ ಮಂಡಲವಿಲ್ಲದ ಸಿಲುವಿನ ಸರಳ, ಬೆನ್ನೆಲುಬಿರದ ಜೀವಿಗಳಲ್ಲಿ, ನಡುನನೆಚರ್ಮದಲ್ಲಿ (ಮೀಸೋಡರ್ಮ್) ಅಲೆದಾಡುವ ಜೀವಕಣಗಳನ್ನು ಆತ ಕಂಡ. ಸಸ್ತನಿಗಳಲ್ಲಿನ ಕೂಡಿಸುವ ಊತಕಕ್ಕೆ ಸಮನಾದುವೇ ಆ ನಡುನನೆಚರ್ಮ. ಒಂದು ಹೆರ ವಸ್ತು ಪ್ರಾಣಿಯ ಹೊರನನೆಚರ್ಮದಲ್ಲಿ (ಎಕ್ಟೊಡರ್ಮ್) ತೂರಿ ಒಳಹೊಕ್ಕರೆ, ಈ ಅಲೆದ ಜೀವಕಣಗಳು ಅದನ್ನು ಸುತ್ತುಗಟ್ಟುತ್ತಿದ್ದುವು. ಮೈ ಪೊಳ್ಳಿನೊಳಕ್ಕೆ ಸೂಕ್ಷ್ಮಜೀವಕಣಗಳು ಅವನ್ನು ನುಂಗಿಹಾಕಿ ಅರಗಿಸಿಕೊಳ್ಳುತ್ತಿದ್ದುವು. ಅವು ಹಾಗೆ ಮಾಡದಿದ್ದಲ್ಲಿ, ಸೂಕ್ಷ್ಮ ಜೀವಾಣುಗಳೇ ಗುಣಿತವಾಗಿ ಆಸರಿಗವನ್ನೇ (ಹೋಸ್ಟ್) ಸಾಯಿಸಿಬಿಡುತ್ತಿದ್ದುವು. ಇದೇ ಅಲ್ಲದೆ, ಮೇಲ್ತರದ ಪ್ರಾಣಿಗಳಲ್ಲಿ ರಕ್ತದಲ್ಲಿರುವ ಹಲರೂಪಿ ನಡುಬೀಜಕ (ಪಾಲಿಮಾರ್ಫೊನ್ಯೂಕ್ಲಿಯಾರ್) ಬಿಳಿಕಣಗಳು, ಒಂಜೀವಿಕಣಗಳು (ಮಾನೋಸೈಟ್ಸ್). ಕೆಂಪಣುಗಿಗಳೂ (ಇಯೋಸಿನೊಫಿಲ್ಸ್), ಊತಕಗಳ ನಿಡುತೀನಿಕಣಗಳೂ (ಮ್ಯಾಕ್ರೊಫೇಜಸ್). ನವಿರುಜಾಲದ ಒಳಪೊರೆಯ (ರೆಟಿಕ್ಯುಲೋ ಎಂಡೋತೀಲಿಯಲ್) ಮಂಡಲದ ಜೀವಕಣಗಳು ತೀನಿಕಣದ ಕೆಲಸಗಳನ್ನು ಮಾಡುತ್ತವೆ.		 (ನೋಡಿ- ತೀನಿ-ಕಣತೆ)

	ನೇರ್ಪಾಟು: ರಕ್ತನಾಳಗಳೂ ಕೂಡಿಸುವ ಊತಕಗಳೂ ಹೆಚ್ಚಿಕೊಂಡಿದ್ದರಿಂದ ಆಗುವ ನೇರ್ಪಾಟಿನ ಕೆಲಸಗಳು ಉರಿತದಲ್ಲಿ ಸಾಮಾನ್ಯ. ಊತಕಗಳು ಹಾಳಾದಾಗ ಮಾತ್ರವೇ ಅಲ್ಲದೆ ಸೂಕ್ಷ್ಮದರ್ಶಕದಲ್ಲೂ ಕಾಣಿಸದ ಹಾಗೆ ಊತಕ ನಾಶವಾದರೂ ನೇರ್ಪಾಟು ಆಗುವುದು. ಕೆಲವು ಅಂಗಗಳ ಉರಿತಗಳಲ್ಲಿ, ನೇರ್ಪಾಟು ಎದ್ದು ಕಾಣುವಂತೆ ಇರುವುದು. ಇರುವ ರಕ್ತನಾಳಗಳಿಂದಲೇ ಮೊಳೆತು ಲೋಮನಾಳಗಳು ಹೊಮ್ಮುತ್ತವೆ. ತಂತುಕಣಗಳಿಂದ (ಫೈಬ್ರೋಬ್ಲಾಸ್ಟ್) ಕೂಡಿಸುವ ಊತಕದ ತಂತುಗಳು ಬೆಳೆಯುತ್ತವೆ. ಮುಖ್ಯವಾಗಿ ನಿಡುತೀನಿಕಣಗಳಿಂದಲೊ ಇರುವ ತಂತು ಕಣಗಳಿಂದಲೋ ಮತ್ತಷ್ಟು ತಂತುಕಣಗಳು ಹುಟ್ಟಿಕೊಳ್ಳುತ್ತವೆ.

ವಿವರಣೆ: ಉರಿತದ ನಾಲ್ಕು ಮೂಲ ಲಕ್ಷಣಗಳಿಗೆ ಈಗ ಕಾರಣಗಳನ್ನು ಹೇಳಬಹುದು. ರಕ್ತನಾಳಗಳು ಹಿಗ್ಗಿದ್ದರಿಂದ ಕೆಂಪೇರಿರುವುದು. ಕೊಂಚಮಟ್ಟಿಗೆ ರಕ್ತನಾಳಗಳ ಹಿಗ್ಗಲಿಕೆಯಿಂದಲೂ ಬಹುಮಟ್ಟಿಗೆ ಸೊನೆ ಜಿನುಗುವುದರಿಂದಲೂ ಉರಿತ ಆಗುವುದು. ಹೆಚ್ಚು ರಕ್ತ ಹರಿವುದರಿಂದ ಕಾವು ಹುಟ್ಟುವುದು. ತುಸುಮಟ್ಟಿಗೆ ಒಂದು ತಾವಿನಲ್ಲಾಗುವ ಊತ, ಒತ್ತಡಗಳಿಂದಲೂ ಉರಿತವೆದ್ದಾಗ ಹೊರಬಿದ್ದ ರಾಸಾಯನಿಕ ವಸ್ತುಗಳು ನರಾಂತಗಳನ್ನು (ನರ್ವ್ ಎಂಡಿಂಗ್ಸ್) ಕೆರಳಿಸುವುದರಿಂದಲೂ ತೋರುವುದು ನೋವು.
						
 (ನೋಡಿ- ಏಕಾಣುಜೀವಿಕ,-ಸೋಂಕಿನ-ರೋಗಗಳು)
 (ನೋಡಿ- ರೋಗವಿಜ್ಞಾನ)

ಉರಿತದ ಬಗೆಗಳು: ಮೂಲವಾಗಿ ಎಲ್ಲ ಉರಿತಗಳೂ ಒಂದೇ ಮಾದರಿಯಲ್ಲಿ ಇರುವುವಾದರೂ ಹಲವಾರು ಬಗೆಗಳನ್ನು ಗುರುತಿಸಬಹುದು. ಬೇಗನೆ ಬರುವ, ಹಲವಾರು ವಾರಗಳಿರುವ ಉರಿತಕ್ಕೆ ಕೂರುರುರಿತ (ಅಕ್ಯೂಟ್) ಎಂದಿದೆ. ಹಲವು ತಿಂಗಳುಗಳೂ ಇನ್ನೂ ಹೆಚ್ಚಿನ ಕೆಲವು ನಿಡುಗಾಲ ಇರುವುದೇ ಬೇರೂರಿದ ಕೂರಾದ ಉರಿತಗಳು. ಸುಮಾರು ಕೂರಾದ ಉರಿತಗಳು. ಸುಮಾರು ಕೂರಾದ ಉರಿತಗಳಲ್ಲಿ, ಹಾಲುರಸಕಣಗಳು (ಲಿಂಥೊಸೈಟ್ಸ್). ನಿಡುತೀನಿಕಣಗಳು, ರೂಪಿತ (ಪ್ಲಾಸ್ಮ) ಜೀವಕಣಗಳೊಂದಿಗೆ ಒಂದಿಷ್ಟು ಹಲರೂಪಿನಡುಬೀಜಕ ಬಿಳಿಕಣಗಳೂ ಬೆರೆತಿರುವುವು. ಬೇರೂರಿದ ಉರಿತಗಳಲ್ಲಿ ಸಾಮಾನ್ಯವಾಗಿ ಎದ್ದು ಕಾಣುವ ಹಾಗೆ ಬೇಕಾದಷ್ಟು ತಂತುಕಣಗಳೂ ಅವೊಂದಿಗಿನ ಕಿರುಎಳೆಗಳೂ (ಪೈಬ್ರಿಲ್ಸ್) ಇರುತ್ತವೆ. ಹಾಲುರಸಕಣಗಳೂ ಮತ್ತಿತರ ಒಂದು ಬೀಜಕ (ಮಾನೊನ್ಯೂಕ್ಲಿಯಾರ್) ಜೀವಕಣಗಳೂ ಹೇರಳವಾಗಿ ಇರುವುದೇ ಸಾಮಾನ್ಯ.

	ಬೇರೆ ಬೇರೆ ರೋಗಕಾರಕಗಳ ಹಾಗೇ ಉರಿತದ ಮಾದರಿಗಳೂ ತೆರತೆರನಾಗಿರುತ್ತವೆ. ಒಂದೆಡೆ ಹರಡುವ, ಚರ್ಮ ಕೂರಾದ ಉರಿತವಾದ ವಿಸರ್ಪಿ(ಎರಿಸಿಪೆಲಾಸ್) ಇದರ ಒಂದು ಉದಾಹರಣೆ. ಇದು ಬೀಟ ರಕ್ತಲಯಕ ಸರಕಾಯ್ಜೀವಿಯಿಂದ (ಹೀಮೊಲಿಟಿಕ್ ಸ್ಟ್ರೆಪ್ಟೊಕಾಕಸ್) ಆಗುವುದು. ಆ ಜಾಗ ಮಸಕು ಕೆಂಪಗೆ ಊದಿಕೊಂಡು ಸುಡುತ್ತ ನೋವಿಡುವುದು ವಿಶೇಷ ಲಕ್ಷಣ. ಏಕಾಣುಜೀವಿಗಳೂ ಒಂದಿಷ್ಟು ರಕ್ತರಸದ ಪ್ರೋಟೀನುಗಳೂ ಸಾಕಷ್ಟು ಬಿಳಿಕಣಗಳೂ ಕೆಂಪುಕಣಗಳೂ ಸೇರಿರುವ ಸೊನೆ ದ್ರವ, ಊತಕಗಳು ಮತ್ತು ಜೀವಕಣಗಳ ನಡುವೆ ಇರುವುದು. ಸಣ್ಣರಕ್ತನಾಳಗಳು ಹಿಗ್ಗುವುವು. ಊತಕ ಕೊಂಚವೇ ಹಾಳಾಗಿರುವುದು. ಉರಿತವೆದ್ದ ಸುಮಾರು ಒಂಬತ್ತು ದಿನಗಳ ಹೊತ್ತಿಗೆ, ತೀನಿಕಣತೆ (ಫೇಗೊಸೈಟೋಸಿಸ್) ಏಕಾಣುಜೀವಿಗಳನ್ನು ಅರಗಿಸಿ ಸಾಗಿಸುವುದನ್ನು ವೇಗಗೊಳಿಸುವ ವಿಶಿಷ್ಟ ಏಕಾಣು ಜೀವಿರೋಧಕ ರೋಧ ವಸ್ತುಗಳ (ಆ್ಯಂಟಿ ಬಾಡೀಸ್) ಹುಟ್ಟಿಕೊಳ್ಳುವುದರಿಂದ ಈ ಅಂಗದ ಗಾಯ ಸಾಮಾನ್ಯವಾಗಿ ಕರಗಿ ಹೋಗುತ್ತದೆ. ಹೀಗೆ ಕರಗಿ ಹೋಗುವಾಗ, ಸೊನೆಯ ದ್ರವಗಳೂ ಜೋಲಂಟುಗಳೂ ಹೀರಿ ಹೋಗುವುವು. ತೀನಿಕಣಗಳೂ ಇಲ್ಲದಂತಾಗಿ, ರಕ್ತನಾಳದ ಪ್ರತಿಕ್ರಿಯೆ ಸಾಮಾನ್ಯ ಮಾದರಿಗಿಳಿಯುತ್ತದೆ.

	ಕೆಲವೇಳೆ ಗುತ್ತಿಕಾಯ್ಜೀವಿಗಳಿಂದ (ಸ್ಟೆಫಿಲೋಕಾಕೈ) ಒಂದು ತಾವಿನಲ್ಲಾಗುವ ಕೂರಾದ ಉರಿತವೇ ಕುರು ಎನಿಸಿಕೊಳ್ಳುವುದು. ಮುಖ್ಯವಾಗಿ ಇದರಲ್ಲಿ ಕೀವು ಗೂಡಿರುತ್ತದೆ. ಕುರುವಿನ ನಡುವೆ ಇರುವ ಕೀವು ಸೊನೆಯ ಒಂದು ರೂಪ. ಕೀವಿನಲ್ಲಿ ಬಹಳವಾಗಿ, ಜೀವಿಯ ಸತ್ತ ಊತಕದೊಂದಿಗೆ ಹಲವು ಸತ್ತ ಬಿಳಿಕಣಗಳೂ ಕೆಲವು ಬದುಕಿರುವ ಬಿಳಿಕಣಗಳು ಇರುವುವು. ನೀರಾಗಿಲ್ಲದ ಕೀವಿನ ಸುತ್ತಲೂ ತಂತುಕದ (ಫೈಬ್ರಿನ್) ಜಾಲರಚನೆಯಿದ್ದು ಸಂದುಗಳಲ್ಲಿ ದ್ರವವೂ ಬಿಳಿಕಣಗಳೂ ಸಿಕ್ಕಿಬಿದ್ದಿರುತ್ತವೆ. ತಂತುಕದ ಬದಿಯಲ್ಲಿ ಬದುಕಿರುವ ಊತಕದ ಪದರ ಇರುವುದು. ಈ ಪದರದ ರಕ್ತನಾಳಗಳಿಂದಲೇ ಸೊನೆಯ ವಸ್ತುಗಳು ಜಿನುಗುವುದು. ಕೀವು ಒಂದೆಡೆ ಬೇರೂರಿ ಕುರು ಎದ್ದಿದ್ದರೆ, ಕೀವಿನ ಸುತ್ತಲೂ ರಕ್ತ ತುಂಬಿದ ಕೂಡಿಸುವ ಊತಕದ ಪದರ ಕವಚವಾಗಿ ಬೆಳೆದುಕೊಳ್ಳುತ್ತವೆ. ಕುರುವಿನಿಂದ ಕೀವನ್ನು ಹೊರಡಿಸಿದ ಮೇಲೆ, ಈ ಪದರದಿಂದಲೇ ಹೊಸ ಹುಟ್ಟಿನಿಂದ ಹುಣ್ಣು ವಾಸಿಯಾಗುವುದು.

	ಹೊರಗಿನಿಂದ ಏನಾದರೂ ಕಸಕಡ್ಡಿಗಳು ಊತಕಗಳ ಒಳಹೊಕ್ಕರೆ ಪರ ವಸ್ತುವಿನ ಪ್ರತಿಕ್ರಿಯೆ ಆಗುವುದು. ಬಿಂಗಾರ (ಟಾಲ್ಕ್), ಕಲ್ಲುಚೂರು, ಹೊಲಿಗೆದಾರ, ಸಿಬರುಗಳು, ಗಾಜಿನ ಚೂರುಪಾರುಗಳಿಂದ, ಸೋಂಕಿಲ್ಲದಿದ್ದರೆ ಕೊಂಚ ಕಾಲದಲ್ಲಿ ಕೂರಾದ ಉರಿತದ ಪ್ರತಿಕ್ರಿಯೆ ಆಗುತ್ತದೆ. ರಕ್ತನಾಳಗಳು ಸೊನೆಯೂ ಇದ್ದೇ ಇರುತ್ತದೆ. ಸಣ್ಣಪುಟ್ಟ ಚೂರುಗಳಾಗಿದ್ದರೆ ಅವನ್ನು ಸುತ್ತುಗಟ್ಟಿ ಕಬಳಿಸುವ ನಿಡುತೀನಿಕಣಗಳು (ಇವು ಒಂದು ನಡುಬೀಜಕಕಣಗಳು) ಎದ್ದು ಕಾಣುತ್ತಿರುತ್ತವೆ. ಒಂದೊಂದೇ ಜೀವಕಣ ನುಂಗಿ ಹಾಕಲಾಗದಷ್ಟು ಕಪ್ಪನೆಯ ಚೂರುಗಳ ಸುತ್ತಲೂ ಹಲವೇಳೆ ಹಲನಡುಬೀಜಗೂಡಿದ ದೈತ್ಯಜೀವಕಣಗಳು ಮುತ್ತುತ್ತವೆ. ಸಣ್ಣ ಸಣ್ಣ ತೀನಿಕಣಗಳು ಒಂದುಗೂಡುವುದರಿಂದಲೊ ಒಂಟಿ ಜೀವಕಣ ಪಾಲಾಗದೆಯೆ ಹಿರಿದಾಗಿ ಬೆಳೆದು ಅದರ ನಡುಬೀಜ (ನ್ಯೂಕ್ಲಿಯಸ್) ಗುಣಿತವಾಗಿಯೊ ಈ ದೈತ್ಯಕಣಗಳು ಆಗುತ್ತವೆ.

	ಕ್ಷಯದ ದಂಡಾಣುಜೀವಿ (ಬೆಸಿಲ್ಲಸ್) ತೆರನ ಕೆಲವು ಗೊತ್ತಾದ ಜೀವಕಣಗಳು ಒಂದು ಪ್ರಾಣಿಯನ್ನು ಮುತ್ತಿ ಒಳನುಗ್ಗಿದರೆ, ಹರಳಗಂತಿತೆರನ (ಗ್ರಾನ್ಯುಲೊಮ್ಯಾಟಸ್) ಉರಿತ ಆಗುವುದೇ ಸಾಮಾನ್ಯ ಪ್ರತಿಕ್ರಿಯೆ. ಕ್ಷಯದಲ್ಲಿ ಕ್ಷಯಗಂಟೆಂಬ (ಟ್ಯೂಬರ್ಕಲ್) ಸಾಸಿವೆತೆರನ (ಮಿಲಿಯರಿ) ಹರಳಗಂತಿ (ಗ್ರಾನ್ಯೂಲೋಮ) ಆಗುವುದು ವಿಶೇಷ. ಒಂದು ಜೀವಿಕಣಗಳಿಂದ ಬಂದ, ಮೇಲುಪೊರೆಯಂಥ (ಎಪಿತೀಲಿಯಾಯ್ಡ್) ಜೀವಿಕಣಗಳು ಎನಿಸಿಕೊಳ್ಳುವ ಒಂದು ನಡುಬೀಜಕ ಜೀವಕಣಗಳು ಇದರ ನಟ್ಟನಡುವಣ ಭಾಗದಲ್ಲಿ ಇರುವುವು. ಇಲ್ಲಿ ರಕ್ತನಾಳಗಳ ಸುಳಿವಿರದು. ಈ ಜೀವಕಣಗಳೊಳಗೆ ಕ್ಷಯದ ದಂಡಾಣುಜೀವಿಗಳು ಇರುತ್ತವೆ. ಇವೊಂದಿಗೆ ಹಲವು ಹಲನಡುಬೀಜಗೂಡಿದ ದೈತ್ಯಕಣಗಳೂ ಬೆರೆತಿರಬಹುದು. ಹಾಲುರಸಕಣಗಳು ಒಳನುಗ್ಗಿರುವ ತಂತುಕಣಗಳ ಜಾಲರಚನೆ ಈ ಜೀವಿಕಣಗಳ ಗುಂಪಿನ ಸುತ್ತುವಲಯದಲ್ಲಿ ಇರುವುದು. ಕ್ಷಯದಿಂದಾದ ಉರಿತದ ನಡುವೆ ಹಲವೇಳೆ ಗಿಣ್ಣಿನಂಥ (ಕೇಸಿಯಸ್) ಅಳಿಗೊಳೆತ (ನೆಕ್ರೋಸಿಸ್) ಇರುವುದು ಹೆಚ್ಚಳಿಕೆ. ಈ ಅಳಿಗೊಳೆತದಿಂದ ಆಸರಿಗದ ಸತ್ತ ಊತಕದ ಗಿಣ್ಣಿತೆರನಾಗಿರುತ್ತದೆ. ಕ್ಷಯ ದಂಡಾಣುಜೀವಿಗಳಿಂದ ಮೈಗೆ ಮೊದಮೊದಲು ಸೋಂಕು ತಾಕಿದರೆ ಗಿಣ್ಣಿತೆರನಾಗಲು ಹಲವಾರು ವಾರಗಳೇ ಹಿಡಿಯುತ್ತದೆ. ಆದರೆ ಎಂದಾದರೂ ಮರು ಸೋಂಕು ಹತ್ತಿತೆಂದರೆ ಕೆಲವೇ ದಿನಗಳಲ್ಲಿ ಹೀಗಾಗುವುದು. ಕ್ಷಯ ದಂಡಾಣುಜೀವಿಗಳ ಉತ್ಪನ್ನಗಳಿಗೆ ಊತಕಗಳ ಈಡುವಳಿಯಿಂದ (ಸೆನ್ಸಿಟೇಷನ್) ಇಷ್ಟು ಬೇಗ ಆಗುತ್ತದೆ.

	ರೋಧಜನಕಗಳ (ಆಚಿಟಿಜನ್ಸ್) ಎದುರಾಗಿ ಒಗ್ಗದಿಕೆ (ಅಲರ್ಜಿಕ್), ಇಲ್ಲವೆ ಕೂಡಲೆ ಆಗುವ ಹೇರೀಡುವಳಿ (ಹೈಪರ್‍ಸೆನ್ಸಿಟಿವಿಟಿ) ಉರಿತವಾಗಿ ತೋರುತ್ತದೆ. ತುರುಚೆದದ್ದು (ಹೈವ್ಸ್), ಕರಡ ಜ್ವರವೂ (ಹೇ ಫೀವರ್) ಇದರ ಎರಡು ಸಾಧಾರಣ ಉದಾಹರಣೆಗಳು, ನುಂಗಿಯೋ ಚುಚ್ಚಿಯೋ ರೋಧಜನಕವನ್ನು ಮೈ ಒಳಹೊಗಿಸಿದಾಗ ಏಳುವ ತುರುಚೆದದ್ದುಗಳ ಆ ತಾವುಗಳಲ್ಲಿ ಕೆಂಪೇರಿಕೆ, ಊತ, ಕೆರತ ಕಾಣಿಸಿಕೊಳ್ಳುತ್ತವೆ. ಸೂಕ್ಷ್ಮದರ್ಶಕದಲ್ಲಿ ನೋಡಿದರೆ, ಸೊನೆಯಲ್ಲಿ ಕೆಲವು ಜೀವಕಣಗಳಿರುವ ಮೆಲುಪಿನ ಕೂರಾದ ಉರಿತ ಆಗಿರುವುದು ಕಾಣುವುದು. ಕರಡ ಜ್ವರದಲ್ಲಿ ರಕ್ತನಾಳಗಳಿಂದ ದ್ರವವೂ ಮೂಗಿನ ಲೋಳೆ ಪೊರೆಯಿಂದ ಲೋಳೆ ನೀರೂ ಹೇರಳವಾಗಿ ಸುರಿಯುತ್ತದೆ. ಇದರಲ್ಲಿರುವ ಜೀವಕಣಗಳಲ್ಲಿ, ಕೆಂಪಗಿನ ಬಿಳಿಕಣಗಳೇ ಹೆಚ್ಚು.

ಕುದುರೆಯ ರಸಿಕೆಯಂಥ (ಸೀರಂ) ಹೊರಗಿಂದ ಬಂದ ಪ್ರೋಟೀನು ರೋಧಜನಕವನ್ನು ಈಡಾಗುವವನಿಗೆ ಚುಚ್ಚಿ ಹೊಗಿಸಿದರೆ, ಆರ್ಥಸ್ ಪ್ರತಿಕ್ರಿಯೆ ಎಂಬ ಒಂದೆಡೆಯ ವಿಪರೀತ ಉರಿತ ಆಗಬಹುದು. ರೋಧಜನಕ-ರೋಧವಸ್ತುಗಳನ್ನು (ಆಂಟಿಬಾಡೀಸ್) ಬೆರೆಸಿ ಒಂದಡೆ ಚುಚ್ಚಿದರೂ ಇದೇ ಆರ್ಥಸ್ ಪ್ರತಿಕ್ರಿಯೆ ತೋರುತ್ತದೆ. ರಕ್ತನಾಳಗಳ ಗೋಡೆಗಳ ಅಳಿಗೊಳೆತ, ಬಿಳಿಕಣಗಳ ಒಳನುಗ್ಗಲು ಕೂಡುಗರಣಿಕೆ ಇವು ಈ ಪ್ರತಿಕ್ರಿಯೆಯ ವಿಶೇಷ ಲಕ್ಷಣಗಳೆಂದು ಕಾಣುವುದು, ಚುಚ್ಚಿ ಒಳ ಬಿಟ್ಟ ಕೆಲವೇ ಮಿನಿಟುಗಳಲ್ಲಿ ಇದು ಆರಂಭವಾಗಿ ಕೆಲವೇ ತಾಸುಗಳಲ್ಲಿ ತುತ್ತತುದಿಗೆ ಏರುತ್ತದೆ. ಪ್ರತಿಕ್ರಿಯೆ ಪೂರ್ತಿಯಾದಾಗ ಕಂಡುಬರುವ ಅದರ ನಟ್ಟನಡುವೆ ಸತ್ತು ಹೋಗಿರುವ ಊತಕ ಕೊನೆಗೆ ಉದುರಿಬಿದ್ದು, ಕೂಡಿಸುವ ಊತಕದಿಂದ ಏರ್ಪಾಟಾಗುವುದು.

	ಹಿಂದೆಂದೋ ಸೋಂಕುಹತ್ತಿರುವ, ಇಲ್ಲವೇ ಕ್ಷಯ ದಂಡಾಣುಜೀವಿಗಳಿಂದ ಮರೆವಣಿದ (ಇಮ್ಯೂನೈಸೆಡ್) ಒಬ್ಬನಿಗೆ ಚೊಕ್ಕಗೊಳಿಸಲು ಕ್ಷಯ ಪ್ರೋಟೀನನ್ನು ಚುಚ್ಚಿ ಹೋಗಿಸಿದಾಗ ಆಗುವ ಕ್ಷಯಾಣುಸಾರದ (ಟ್ಯುಬಕ್ರ್ಯುಲಿನ್) ಬಗೆಯ ಇಲ್ಲವೇ ತಡವಾದ ಹೇರೀಡುವಳಿ ಇನ್ನೊಂದು ಬಗೆಯದು. ಇಲ್ಲಿ ಸುಮಾರು ಒಂದು ತಾಸಿನಲ್ಲಿ ಈ ಪ್ರತಿಕ್ರಿಯೆ ಆರಂಭವಾದರೂ ಅದರ ತುತ್ತತುದಿಗೇರಬೇಕಾದರೆ ಎರಡು ಮೂರು ದಿನಗಳೇ ಹಿಡಿಯುತ್ತದೆ. ಊತಕ ಜೀವಕಣಗಳು ಸಾಯುವುದೇ ಮೊದಲು ಕಾಣುವ ಬದಲಾವಣೆ. ಚರ್ಮದಲ್ಲಿ ಹೀಗಾದರೆ ಮೇಲುಪೊರೆ, ತಂತುಕಣಗಳು, ರಕ್ತನಾಳಗಳ ಗೋಡೆಗಳೂ ಸಾಯುವುವು.

	ಗೊತ್ತಾದ ಕೆಲವು ಅಂಗಗಳಲ್ಲಿ ಉರಿತದ ಇನ್ನೂ ಹಲವಾರು ಬಗೆಗಳನ್ನು ಕಾಣಬಹುದು. ಮಿದುಳಿನ ಜೀರ್ಣಸಾಗುನಾಳದ ಪುಪ್ಪುಸಗಳ ಕವಚಗಳಾಗಿರುವ ಪೊರೆಗಳ ಉರಿತವಾದರೆ, ಕ್ರಮವಾಗಿ ಮಿದುಳುಪೊರೆಯುರಿತ (ಮೆನಿಂಜೈಟಿಸ್). ಹೊರ ಬಿಗಿಪೊರೆಯೂತ (ಪೆರಿಟೋನೈಟಿಸ್), ಅಳ್ಳೆಪೊರೆಯುರಿತ (ಪ್ಲೊರೈಟಿಸ್) ಆಗುವುದೇ ಇದರ ಉದಾಹರಣೆಗಳು. ಕೀಲುವಾತದ (ರುಮ್ಯಾಟಿಕ್) ಜ್ವರ ಬಂದಾಗ, ಗುಂಡಿಗೆಯಲ್ಲಿ ಸ್ನಾಯು ಉರಿತವೂ (ಮೈಯೊಕಾರ್ಡೈಟಿಸ್). ಕವಾಟ ಉರಿತವೂ (ವಾಲ್ಟುಲೈಟಿಸ್) ಆಗುವುವು. ಗೊಂಡೆಮೂತ್ರಪಿಂಡದ ಉರಿತವೂ (ಗ್ಲೊಮೆರುಲೊನೆಫ್ರೈಟಿಸ್) ಮೂತ್ರ ಪಿಂಡಗುಳಿಯ ಉರಿತವೂ (ಪಯೊಲೊನೆಫ್ರೈಟಿಸ್) ಮೂತ್ರ ಪಿಂಡದಲ್ಲಿ ಆಗುವ ಬಗೆಗಳು, ಇವೆಲ್ಲದರಲ್ಲೂ ಒಂದೊಂದು ವಿಶೇಷವಾಗಿರುತ್ತದೆ. ರೋಗಕ್ಕೆ ಕಾರಣವಾದ ಕಾರಕ ತಾಕಿರುವ ಅಂಗ ಆಸರಿಗದಲ್ಲಿನ ಮಾರ್ಪಾಟಿಕ ಅಂಶಗಳು ಇದಕ್ಕೆ ತಕ್ಕ ಹಾಗೆ ರೋಗದ ಲಕ್ಷಣಗಳು ಇರುವುದಾದರೂ ಮೂಲಮಾದರಿಯೇನೂ ಒಂದೆ ತೆರನೇ.

	ಉರಿತದ ಯಾಂತ್ರಿಕತೆ : ಉರಿತದಲ್ಲಿ ರಕ್ತನಾಳಗಳಲ್ಲಾಗುವ ಬದಲಾವಣೆಗಳ ಕ್ರಮವಂತೂ ತೀರಾ ಸಿಕ್ಕಿನದು. ರಕ್ತನಾಳಗಳ ಒಳಡ್ಡಳತೆ, ರಕ್ತದ ಹರಿವುಗಳನ್ನು ಕೊಂಚಮಟ್ಟಿಗೆ ನರದ ಮಂಡಲ ಹತೋಟಿಗೊಳಿಸುವುದು. ಗಾಯವಾದ ಮೊದಲಲ್ಲಿ ಕಾಣುವ ರಕ್ತನಾಳಗಳ ಕುಗ್ಗು, ಹಿಗ್ಗಲಿಕೆಗಳಿಗೆ ಅದೇ ತಾವಿನ ನರದ ಹಿಮ್ಮುರಿಕಗೆ (ಆಕ್ಸಾನ್ ರಿಫ್ಲೆಕ್ಸ್) ಕಾರಣವಾಗಿರಬಹುದು. ಇಷ್ಟಾದರೂ ನರಗಳಿಲ್ಲದ ತಾವುಗಳಲ್ಲೂ ಎಂದಿನ ರೀತಿಯಲ್ಲೇ ಉರಿತ ಆಗುತ್ತದೆ. ಆದ್ದರಿಂದ ಈ ಪ್ರತಿಕ್ರಿಯೆ ಬಹುಮಟ್ಟಿಗೆ ರಾಸಾಯನಿಕಗಳ ಮೂಲಕವೇ ನಡೆಯಬೇಕು.
ಹಿಸ್ಟಮೀನನ್ನು ಚುಚ್ಚಿ ಹೊಗಿಸಿದಾಗಲೂ ಉರಿತದಲ್ಲಿ ಆಗುವ ಹಾಗೇ ರಕ್ತನಾಳ ಹಿಗ್ಗುವುದನ್ನೂ ಹೆಚ್ಚಿಗೆ ಜಿನುಗುವುದನ್ನೂ ಇಂಗ್ಲೆಂಡಿನ ವೈದ್ಯ ಸರ್ ಥಾಮಸ್ ಲೂಯಿಸ್ ತೋರಿಸಿದ, ಅದನ್ನೆ ಒಬ್ಬನ ಚರ್ಮದೊಳಕ್ಕೆ ಕೊಂಚ ಚುಚ್ಚಿ ಹೊಗಿಸಿದರೆ ಎಂದಿನಂತೆ ಕೆಂಪೇರಿ ಊದಿಕೊಂಡರೂ ಬಿಳಿಕಣಗಳು ಅಂಟಿಕೊಂಡು ರಕ್ತನಾಳಗಳಿಂದ ಈಚೆಗೆ ನುಣುಚಿಕೊಳ್ಳವುವು. ಉರಿತದಲ್ಲಿ, ರಕ್ತನಾಳಗಳ ಬಳಿ ಇರುವ ತುಂಬು (ಮಾಸ್ಟ್) ಜೀವಕಣಗಳಲ್ಲಿರುವ ಹಿಸ್ಟಮೀನ್ ಹೊರಬೀಳುತ್ತದೆ. ತುರುಚೆದದ್ದು. ಕರಡ ಜ್ವರದ ತೆರನ ಮೆಲುಪಿನ ಉರಿತಗಳಲ್ಲಿ, ಆ ತಾವಿನಲ್ಲಿ ಆಗುವ ಪ್ರತಿಕ್ರಿಯೆಯನ್ನು ಹಿಸ್ಟಮೀನ್ ರೋಧಕಗಳು (ಆಂಟಿಹಿಸ್ಟಮೀನ್ಸ್) ಆಗಗೊಡಿಸವು. ಇಲ್ಲವೇ ತಗ್ಗಿಸುವುವು. ಆದರೆ ಹಲವಾರು ಬಗೆಯ ಉರಿತಗಳಲ್ಲಿ ರಕ್ತನಾಳಗಳ ಪ್ರತಿಕ್ರಿಯೆಯನ್ನು ಮಾತ್ರ ಈ ಮದ್ದುಗಳು ತಪ್ಪಿಸವು. ಹೀಗಾದುದರಿಂದ ಹಿಸ್ಟಮೀನ್ ಅಲ್ಲದ ಇನ್ನಾವುದೋ ವಸ್ತುಗಳು ಈ ಪ್ರತಿಕ್ರಿಯೆಗೆ ಕಾರಣವಿರಬೇಕು.

	ಅಮೈನೋ ಆಮ್ಲ ಟ್ರಿಪ್ಟೊಫ್ಯಾನಿನಿಂದ ತಯಾರಾದ, ಅಲ್ಲದೆ ತುಂಬು ಜೀವ ಕಣಗಳಲ್ಲೂ ಇರುವ, 5-ಹೈಡ್ರಾಕ್ಸಿಟ್ರಿಪ್ಟಮೀನ್ (ಸೆರೋಟೆನಿನ್) ಕೆಲವು ಜೀವಿ ಜಾತಿಗಳಲ್ಲಿ, ಹಿಸ್ಟಮೀನಿನಿಂದ ಆಗುವ ತೆರನ ಪ್ರತಿಕ್ರಿಯೆಗಳನ್ನೇ ಕೆರಳಿಸಬಹುದು. ರಕ್ತನಾಳಗಳಿಂದ ನುಣುಚಿಕೊಳ್ಳುವಂತೆ ಮಾಡುವ ರಕ್ತರಸದ ಗೋಳಕಿ (ಗ್ಲಾಬ್ಯುಲಿನ್) ಇನ್ನೊಂದು ಕಾರಕ. ಜೀವಕಣಗಳಲ್ಲಿನ ಇತರ ವಸ್ತುಗಳೂ ಇದರಲ್ಲಿ ಪಾಲ್ಗೊಳ್ಳಬಹುದು. ಇದೂ ಅಲ್ಲದೆ, ರಕ್ತನಾಳ ಹಿಗ್ಗಲಿಸುವ ತೆರನ ವಸ್ತುಗಳನ್ನು ಏಕಾಣು ಜೀವಿಗಳೂ ಹುಟ್ಟಿಸಿ ಹೊರಬಿಡುತ್ತದೆ.

	ಉರಿತದ ಕ್ರಮಗತಿಯಲ್ಲಿ, ಕರಣಕಾರದ ವಸ್ತುಗಳೂ ಆಸರಿಗಗಳೂ ಒಂದರೊಡನೊಂದು ವರ್ತಿಸುತ್ತವೆ. ಏಕಾಣುಜೀವಿಗಳು ಹಲವಾರು ಪದಾರ್ಥಗಳನ್ನು ಹೊರಬಿಡುತ್ತವೆ. ಬದುಕಿರುವ ಜೀವಕಣಗಳಿಂದ ಕೆಲವು ಹೊರಬಿದ್ದರೆ ಇನ್ನು ಹಲವು ಏಕಾಣುಜೀವಿಗಳು ಸತ್ತಾಗ ಹೊರಬೀಳುವುವು. ತಂತುಜನಕ (ಫೈಬ್ರಿನೋಜನ್) ಗರಣೆಗಟ್ಟುವಂತೆ ಮಾಡುವ ಗರಣೆದೊಳೆಯನ್ನು (ಕೊಯಾಗುಲೇಸ್) ಗುತ್ತಿಕಾಯ್ಜೀವಿಗಳು ತಯಾರಿಸಿ ಬಿಡುವುದು ಒಂದು ಉದಾಹರಣೆ. ಒಂದು ತಾವಿನಿಂದ ಊತಕಗಳ ನಡುವಣ ತೆರಪುಗಳು ಹಾಲುರಸನಾಳಗಳ ಮೂಲಕ ತಂತುಕಾರಕಗಳು ಹರಡಿಕೊಳ್ಳುವುದಕ್ಕೆ ತಂತುಕದ ಗರಣೆ ಅತಿ ಸಣ್ಣ ಅಡಚಣೆ. ಜೀವಕಣಗಳ ನಡುವಣ ಅಡಿಗಟ್ಟಿನ ವಸ್ತುವಿನ ಜಿಗುಟನ್ನು ಕುಗ್ಗಿಸಿ, ದ್ರವ, ಚೂರು ಚೂರುಗಳು ಹರಡುವುದನ್ನು ಸರಾಗಗೊಳಿಸಬಲ್ಲ ಒಂದು ದೊಳೆಯದ ಹಯಲೂ ರೋನೀಡೇಸನ್ನು ಬೇರೆ ಏಕಾಣುಜೀವಿಗಳಾದ ಸರಕಾಯ್ಜೀವಿಗಳೂ ಗಾಳಿಕಾಯ್ಜೀವಿಗಳೂ (ನ್ಯೂಮೋಕಾಕೈ) ಹೊರಬಿಡುತ್ತವೆ. ಕೆಲವು ಏಕಾಣುಜೀವಿಗಳಿಂದಾಗುವ ಹರಡಿಕೊಳ್ಳುವ ಉರಿತಗಳಿಗೆ ಈ ಹಯಲುರೋನಿಡೇಸೊ ಇನ್ನಾವುದೊ ಹರಡಬಲ್ಲ ಅಂಶಗಳೂ ಕಾರಣವಿರಬೇಕಕು. ಜನೆಗೊಬ್ಬುದೊಳೆಗಳು (ಲೆಸಿತಿನೇಸಸ್). ಅಂಟು ಜನಕದೊಳೆಗಳು (ಕೊಲ್ಲಾಜಿನೇಸಸ್), ಪ್ರೋಟೀನುಲಯಕದೊಳೆಗಳು ನ್ಯೂಕ್ಲೀಯಿಕ್ ಆಮ್ಲಗಳನ್ನು ಒಡೆವ ದೊಳೆಗಳು ಏಕಾಣುಜೀವಿಗಳಿಂದ ತಯಾರಾಗುತ್ತವೆ. ಉರಿತದಲ್ಲಾಗುವ ರಾಸಾಯನಿಕ ಚಲನವಲನಗಳೂ ಉರಿತದ ತೋರಿಕೆಗಳಲ್ಲೂ ಅವುಗಳಲ್ಲಿ ಒಂದೊಂದೂ ಪಾಲುಗೊಳ್ಳವುದು. ಇವುಗಳಲ್ಲಿ ಕೆಲವು ಉರಿತವನ್ನು ಕೆರಳಿಸುವಂತಿದ್ದರೆ, ಬೇರೆಯವು ಕುಂದಿಸುತ್ತವೆ.

	ಪೆಟ್ಟು ಗಾಯ, ಸುಟ್ಟರಗಿಕ (ಕರೋಸಿವ್) ರಾಸಾಯನಿಕಗಳು, ಏಕಾಣು ಜೀವಿಗಳು, ರೋಧಜನಕ-ರೋದವಸ್ತು ಬೆರಕೆಗಳೆಲ್ಲ ಊತಕದ ಜೀವಕಣಗಳನ್ನೇ ಗಾಯಗೊಳಿಸಿ ಉರಿತವನ್ನು ಕೆರಳಿಸುತ್ತವೆ. ಸತ್ತ, ಸಾಯುತ್ತಿರುವ ಜೀವಕಣಗಳಿಂದ ಹೊರಬಿದ್ದ ವಸ್ತುಗಳೂ ಉರಿತದ ಮರುವರ್ತನೆಯನ್ನು ಚೋದಿಸುತ್ತವೆ. ಹೀಗೆ ಹೊರಬಿದ್ದ ವಸ್ತುಗಳಲ್ಲಿ ಕೆಲವು ಜೀವಕಣಗಳ ಪ್ರೋಟೀನುಗಳನ್ನು ಒಡೆದುದರಿಂದ ಹಲಪೆಪ್ಟೈಡುಗಳೂ ಇರುವುವು. ಗಾಯಗೊಂಡ ತುಂಬು ಜೀವಕಣಗಳಿಂದ ಬಂದ ಅಮೀನುಗಳು ಕೆಲವು. ಇನ್ನೂ ಕೆಲವು ನ್ಯೂಕ್ಲೀಯಿಕಾಮ್ಲಗಳನ್ನು ಪಡೆದುದರಿಂದ ಬಂದಿರಬಹುದು. ಆರ್ಥಸ್ ಪ್ರತಿಕ್ರಿಯೆಯಲ್ಲಿ ಕಿರಿಸಿರಗಳ (ವೆನ್ಯೂಲ್ಸ್) ಒಳ ಪೊರೆಯಡಿಯಲ್ಲಿ ರೋಧಜನಕ-ರೋಧವಸ್ತು ಬೆರಕೆಗಳು ಕಂಡುಬಂದಿವೆ. ಕೊಳೆಯ ಚಟುವಟಿಕೆಗಳನ್ನು ತೋರುವ ಪೂರಕದೊಂದಿಗೆ (ಕಾಂಪ್ಲಿಮೆಂಟ್) ಇವು ಕೂಡಿಕೊಳ್ಳುತ್ತವೆ. ಇದರಿಂದೇಳುವ ರೋಧಜನಕ - ರೋಧವಸು ್ತ- ಪೂರಕ ಬೆರೆಕೆ ಒಟ್ಟಿಗೇ ಜೀವಕಣಗಳನ್ನು ಹಾಳುಗೆಡಿಸಿ ಉರಿತಕ್ಕೆ ದಾರಿಮಾಡಿಕೊಡುವುದು. ಉರಿತದ ಯಾಂತ್ರಿಕತೆಗೆ ಬಹುಮಟ್ಟಿನ ಕಾರಣ ದೊಳೆಗಳು. ಇದರಿಂದಲೇ ದೊಳೆಗಳನ್ನು ಅಣಗಿಸುವ ವಸ್ತುಗಳಿಂದ ಉರಿತವನ್ನೂ ಒಂದಿಷ್ಟು ಉಡುಗಿಸಬಹುದು.

	ಉರಿತದಲ್ಲಿ ಕಂಡುಬರುವ, ರಕ್ತನಾಳಗಳ ಆಚೆಗೆ ಅವುಗಳ ಒಳಪೊರೆಯ ಮೂಲಕ ರಕ್ತರಸದ ಜೋಲಂಟುಗಳ ಸಾಗಣೆ, ಬಿಳಿಕಣಗಳು, ಸಣ್ಣವಸ್ತುಗಳ ನುಸುಳಿಕೆ, ಇವನ್ನೆಲ್ಲ ವಿವರಿಸಲು ಹಲವಾರು ಯಾಂತ್ರಿಕತೆಗಳನ್ನು ಸೂಚಿಸುವುದುಂಟು. ರಕ್ತನಾಳದ ಒಳವರಿಯಲ್ಲಿನ ತೂತುಗಳು ರಕ್ತರಸದಲ್ಲಿನ ಪ್ರೋಟೀನುಗಳು ಆಚೆಗೆ ನುಸುಳುವಷ್ಟು ಮಾತ್ರ ದೊಡ್ಡದಾಗಿರುವುದೆಂದು ಕೆಲವು ಶೋಧಕರು ಅನುಮಾನಿಸಿರುವರು. ಈ ಗಾತ್ರದ ಯಾವ ತೂತೂ ವಿದ್ಯುದಂಶ ಸೂಕ್ಷ್ಮದರ್ಶಕದಲ್ಲಿ (ಎಲೆಕ್ಟ್ರಾನ್ ಮೈಕ್ರೋಸ್ಕೋಪ್) ಕೂಡ ಕಾಣದಿದ್ದರೂ ಒಳಪೊರೆಯ ಜೀವಕಣಗಳ ಮೂಲಕ ಸಣ್ಣ ವಸ್ತುಗಳೂ ನುಸುಳಿರುವುದನ್ನು ನೋಡಬಹುದು. ಈ ಯಾಂತ್ರಿಕತೆಗೆ ಕಣದೀಂಟಿಕೆ (ಪೈನೊಸೈಟೋಸಿಸ್) ಎಂದು ಹೆಸರಿದೆ. ಒಳಪೊರೆಯ ಜೀವ ಕಣಗಳ ನಡುವಣ ತೆರಪುಗಳ ಮೂಲಕ ಸಾಗುವುದು ಮೂರನೆಯ ವಿಧಾನ. ಉರಿತದಲ್ಲಿ, ಸಣ್ಣಸಣ್ಣ ವಸ್ತುಗಳೂ ಕರಗುವ ಜೋಲಂಟುಗಳೂ ದ್ರವವೂ ಈ ಅಗಲನೆಯ ತೆರಪುಗಳಲ್ಲಿ ದಾಟುತ್ತವೆ. ಎಲ್ಲ ಬಗೆಗಳ ಬಿಳಿಕಣಗಳೂ ಒಳಪೊರೆಗೆ ಅಂಟಿಕೊಂಡ ಮೇಲೆ, ಈ ತೆರಪುಗಳ ಮೂಲಕ ಹೊರ ಬೀಳುತ್ತವೆ. ಇಷ್ಟಾದರೂ ಬಿಳಿಕಣಗಳು ಅಂಟಿಕೊಳ್ಳುವುದಕ್ಕೂ ಒಳಪೊರೆಯಿಂದ ಹೊರಕ್ಕೆ ನುಸುಳುವುದಕ್ಕೂ ಕಾರಣ ಕಾರಕ ವಸ್ತುಗಳು ಯಾವುದೆಂದು ಗೊತ್ತಿಲ್ಲ. ಉರಿತವೆದ್ದಿರುವ ಜಾಗದಲ್ಲಿ ಏಕಾಣುಜೀವಿಗಳ ಕಡೆಗೆ ಬಿಳಿಕಣಗಳು ಸೆಳೆದುಹೋಗುತ್ತವೆ. ಏಕಾಣುಜೀವಿಗಳನ್ನು ತಾಕಿದ ಕೂಡಲೆ ಅವನ್ನು ಸುತ್ತುವರಿದು ಕಬಳಿಸಿ ಅರಗಿಸಿಕೊಳ್ಳುವುದು ಕಬಳಿಸುವಾಗ ಬಿಳಿಕಣಗಳೊಳಗೆ ಏಳುವ ಮುಚ್ಚರಗುಳ್ಳೆಯಲ್ಲಿ (ವ್ಯಾಕ್ಯುಯೋಲ್) ಏಕಾಣುಜೀವಿಗಳು ಸತ್ತು ಕರಗಿ ಹೋಗುವುದು ಸಾಮಾನ್ಯ. ಬಿಳಿಕಣಗಳಲ್ಲಿನ ಸಣ್ಣ ಹರಳಂಥ ಕಣಗಳೇ ಏಕಾಣುಜೀವಿಗಳನ್ನು ಸಾಯಿಸಿ ಕರಗಿಸುವ ವಸ್ತುಗಳು. ಏಕಾಣುಜೀವಿ ಮಾರಕ ಬಲವಿರುವ, ಹಿಸ್ಟೋನ್ ಕೂಡ ಸೇರದಂತೆ ಹಲವಾರು ಕಾರಕಗಳೂ ಲಯ ದೊಳೆಯೂ (ಲೈಸೊಜೈಮ್) ಈ ಕಣಗಳ ತುಂಬ ಇರುವುವು. ಫಾಸ್ಫೆಟೇಸ್ ಪೆಪ್ಟಿಡೇಸ್, ಪೆರಾಕ್ಸಿಡೇಸ್, ನ್ಯೂಕ್ಲಿಯೋಸೈಡೇಸುಗಳೇ ಮುಂತಾದ ಬೇರೆ ದೊಳೆಗಳು ಬಿಳಿಕಣಗಳ ಈ ಸಣ್ಣ ತಾಣಗಳಲ್ಲಿ ಇರುತ್ತವೆ. ತೀನಿಕಣತೆ ಆಗುವಾಗ ಈ ಕಣಗಳು ಇಲ್ಲವಾಗುತ್ತವೆ. ಇವುಗಳ ದೊಳೆಗಳು ಜೀವಕಣದೊಳಕ್ಕೆ ಬಂದು ಕರಗಿಸುವ ಮುಚ್ಚರಗುಳ್ಳೆಯ ಒಳಹೋಗುವುವು. ಈ ದೊಳೆಗಳಲ್ಲಿ ಬಹುಪಾಲಿನವು ಆಮ್ಲಗಳಲ್ಲಿದ್ದಾಗ ಚೆನ್ನಾಗಿ ಕೆಲಸ ಮಾಡುತ್ತವೆ. ಬಿಳಿಕಣದೊಳಗೆ ಗ್ಲೂಕೋಸ್ ಕೊಂಚ ಪಾಲು ಹಾಲಿನಾಮ್ಲವಾಗಿ (ಲ್ಯಾಕ್ಟಿಕ್ ಆಸಿಡ್) ಜೀವವಸ್ತುಕರಣವಾಗುವುದರಿಂದ ಸಾಮಾನ್ಯವಾಗಿ ಮುಚ್ಚರಗುಳ್ಳೆಯಲ್ಲಿ ಆಮ್ಲ ಗುಣವಿರುವುದು. ಒಂದು ನಡುಬೀಜಕ ಬಿಳಿಕಣಗಳಲ್ಲೂ ಎಸ್ಟರೇಸುಗಳು. ಲೈಪೇಸುಗಳೂ ಸೇರಿದಂತೆ ದೊಳೆಗಳು ಇರುವುವು. ಜೀವಕಣದೊಳಗಣ ಅರಗಣೆಯಲ್ಲಿ ಇವೂ ಪಾಲ್ಗೊಳ್ಳುತ್ತವೆ. ಬಿಳಿಕಣಗಳು ಹಾಳಾಗಿ ಒಡೆದಾಗ ಅರಗಿ ಉಳಿದ ವಸ್ತುಗಳೂ ಅವುಗಳ ದೊಳೆಗಳು ಉರಿತವೆದ್ದಿರುವ ಜಾಗದಲ್ಲಿ ಬೀಳುವುದರಿಂದ, ಆ ತಾವಿನಲ್ಲಿ ಕೀವನ್ನು ಕರಗಿಸಿ, ರಕ್ತನಾಳಗಳ ಪ್ರತಿಕ್ರಿಯೆಗಳನ್ನು ಮುಂದುವರಿಸುತ್ತ ನೇರ್ಪಾಟನ್ನು ಚೋದಿಸುತ್ತದೆ.

	ಉರಿತದ ಬದಲಿಕೆ: ರಕ್ತನಾಳಗಳೇ ಇರದ ಕೆಳಮಟ್ಟದ ಪ್ರಾಣಿಗಳಲ್ಲಿ ವಲಸೆ. ತೀನಿಕಣತೆ, ಜೀವಕಣದ ರಸಸುರಿತ, ನೇರ್ಪಾಟಿನ ತೆರನ ಕೇವಲ ಜೀವಕಣದ ಪ್ರತಿಕ್ರಿಯೆಯಾಗಿ ಉರಿತ ತೋರುವುದು. ಮೇಲ್ತರದ ಪ್ರಾಣಿಗಳಲ್ಲಿ ಸಿಕ್ಕಿನ ರಕ್ತನಾಳಗಳ ಮಂಡಲ ಇರುವುದರಿಂದ ವಿಶೇಷಿಕರಿತ ಕಾಪಿಡುವ ಜೀವಕಣಗಳನ್ನೂ ರಾಸಾಯನಿಕ ವಸ್ತುಗಳನ್ನೂ ಗಾಯವಾಗಿರುವ ಜಾಗಕ್ಕೆ ಬೇಗನೆ ಸಾಗಹಾಕುವಂತಿರಬೇಕು.

	ಇನ್ನಷ್ಟು ಹೆಚ್ಚಿಗೆ ವಿಶೇಷೀಕರಣದೊಂದಿಗೆ ನರಗಳ, ಒಳಸುರಿಕ ಗ್ರಂಥಿಗಳ ಮಂಡಲಗಳ ತೆರನ ಬೇರೆ ಹತೋಟಿ ಯಾಂತ್ರಿಕತೆಗಳೂ ಒದಗಿವೆ. ಅಡ್ರಿನಲ್ ಗ್ರಂಥಿಗಳ (ನೋಡಿ- ಅಡ್ರಿನಲ್-ಗ್ರಂಥಿಗಳು) ಒಳಸುರಿಕ ಜೋದನಿಕಗಳು (ಹಾರ್ಮೋನ್ಸ್) ಉರಿತವನ್ನು ಬದಲಿಸಬಲ್ಲವು. ಉದಾಹರಣೆಗೆ. ಅಡ್ರಿನಲಿನನ್ನು ಬೇಕಾದೆಡೆಯಲ್ಲಿ ಚುಚ್ಚಿ ಹೊಗಿಸಿದರೆ ರಕ್ತ ತುಂಬಿಕೊಳ್ಳುವುದನ್ನು ತಪ್ಪಿಸಿ ಸೊನೆವುದನ್ನೂ ಒಂದಿಷ್ಟು ತಗ್ಗಿಸಬಹುದು. ಅಡ್ರಿನಲ್ ರಗಟೆಯ (ಕಾರ್ಟೆಕ್ಸ್) ಜೋದನಿಕವಾದ 17-ಹೈಡ್ರಾಕ್ಸಿಕಾರ್ಟಿಸೋನ್ ಎಷ್ಟು ಕಾಲಬೇಕಾದರೂ ಉರಿತದ ಪ್ರತಿಕ್ರಿಯೆಯ ಎಲ್ಲ ಹಂತಗಳನ್ನೂ ಅಣಗಿಸಬಲ್ಲದು. ರೋಗಕಾರಕಗಳು ಬದುಕಿರುವ ವಿಷಮ ಏಕಾಣುಜೀವಿಗಳಾಗಿರದಿದ್ದಲ್ಲಿ, ಚಿಕಿತ್ಸೆಯಲ್ಲಿ ಈ ಚೋದನಿಕಗಳು ಚೆನ್ನಾಗಿ ಅನುಕೂಲಿಸುತ್ತವೆ. ಆದರೆ ಏಕಾಣುಜೀವಿಗಳಿಂದಾದ ಸೋಂಕಿನಲ್ಲಿ ಉರಿತದ ಪ್ರತಿಕ್ರಿಯೆಯ ಒಂದು ಪಾಲನ್ನೋ ಎಲ್ಲವನ್ನೋ ಅಣಗಿಸುವುದರಿಂದ ಕೆಡುಕೂ ಆಗಬಹುದು.

ಉರಿತದಲ್ಲಿ ಕೀಲಿಯಂತಿರುವ ಕೆಲವು ಮೂಲವಸ್ತುಗಳೇ ಇಲ್ಲವಾಗುವುದರಿಂದ ಏಳುವ ಕೆಡಕಿನ ಪರಿಣಾಮಗಳನ್ನು ಕೆಲವರಲ್ಲಿ ಕಾಣಬಹುದು. ಕೆಲವರು ತಲತಲಾಂತರವಾಗಿ ರೋಧವಸ್ತುಗಳನ್ನು ತಯಾರಿಸುವ ಬಲವೇ ಇಲ್ಲವಾಗಿರುವವರು. ಇಂಥವರು ಸೋಂಕುಗಳಿಗೆ ಬಲು ಸುಲಭವಾಗಿ ಈಡಾಗುವರು. ರಕ್ತದಲ್ಲಿ ಬಿಳಿಕಣಗಳ ಕೊರೆ ಅತಿಯಾಗಿರುವ ಹರಳುಕಣಾಭಾವದಲ್ಲಿ (ಎಗ್ರಾನುಲೋಸೈಟೋಸಿಸ್) ಸೊಂಕನ್ನು ತಡೆವ ಬಲ ಕುಗ್ಗಿರುವುದು. ಅಂಥ ರೋಗಿಗಳಲ್ಲಿ ಉರಿತವಾದರೆ ಕೀವಿಲ್ಲದ, ಕೇವಲ ರಕ್ತತುಂಬಿಕೊಂಡು ಊತಕ ಅಳಿಗೊಳೆತ ಆಗುತ್ತದೆ. ಹಲವರಲ್ಲಿ ಉರಿತವೆದ್ದಾಗ ಪ್ರತಿಕ್ರಿಯೆ ಎಲ್ಲೊ ಕೊಂಚವಾಗಿದ್ದರೆ, ಕೆಲವರಲ್ಲಿ ಇದೇ ವಿಪರೀತವಾಗಿರುವುದು, ಇವರು ಹೇರೀಡುವಳಿಯವರು. ಕರಡ ಜ್ವರದಿಂದ ನರಳುವವರು, ಬಹುಮಟ್ಟಿಗೆ ಕೀಲುವಾತದ ಜ್ವರ, ಕೀಲುರಿತಗಳ (ಆತ್ರ್ರೆಟೆಸ್) ರೋಗಿಗಳು-ಇಂಥವರಲ್ಲಿ ಈ ತೆರನ ಪ್ರತಿಕ್ರಿಯೆ ಕಾಣುವುದು.

(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ